ಗ್ರೇಯಮ್ ಥಾಮಸ್

	1805 - 1869. ಸ್ಕಾಟಿಷ್ ರಸಾಯನ ವಿಜ್ಞಾನಿ. ಭೌತ ರಸಾಯನ ವಿಜ್ಞಾನದ ಸ್ಥಾಪಕರಲ್ಲಿ ಒಬ್ಬನೆಂದೂ ಕಲಿಲ ರಸಾಯನ ವಿಜ್ಞಾನದ (ಕಲಾಯ್ಡ್ ಕೆಮಿಸ್ಟ್ರಿ) ಮೂಲ ಪುರುಷನೆಂದು ಹೆಸರು ಗಳಿಸಿದ್ದಾನೆ. ಅನಿಲಗಳು ವ್ಯಾಪಿಸುವ ದರವನ್ನು ಅಳೆದು ಗ್ರೇಯಮನ ಅನಿಲ ವಿಸರಣ ನಿಯಮ ಎಂದು ಈಗ ಪ್ರಸಿದ್ಧವಾಗಿರುವ ನಿಯಮವನ್ನು ಕಂಡುಹಿಡಿದ. ಕಲಿಲ ರಸಾಯನ ವಿಜ್ಞಾನದಲ್ಲಿ ಇಂದು ಬಳಕೆಯಲ್ಲಿರುವ ಮುಖ್ಯವಾಗಿ ಪಾರಿಭಾಷಿಕ ಪದಗಳಲ್ಲಿ ಬಹುಪಾಲು ಪದಗಳು ಈತ ಸೃಷ್ಟಿಸಿದಂಥವೇ.

	ಸ್ಕಾಟ್ಲೆಂಡಿನ ಗ್ಲಾಸ್ಗೊ ನಗರದಲ್ಲಿ 1805ರ ಡಿಸೆಂಬರ್ 20ರಂದು ಗ್ರೇಯಮ್ ಜನಿಸಿದ. ತಂದೆ ಐಶ್ವರ್ಯವಂತನಾಗಿದ್ದ ಒಬ್ಬ ವಾಣಿಜ್ಯೋದ್ಯಮಿ. ತಮ್ಮ ಮಗ ಇಗರ್ಜಿಯಲ್ಲಿ ಪಾದ್ರಿಯಾಗಬೇಕೆಂಬುದು ಈತನ ಆಶಯ. ಆದರೆ ಮಗ ವಿಜ್ಞಾನವನ್ನೇ ಅಭ್ಯಾಸ ಮಾಡುವುದಾಗಿ ಹಟ ಹಿಡಿದುದರಿಂದ ತಂದೆ ಆರ್ಥಿಕ ನೆರವು ನೀಡಲು ನಿರಾಕರಿಸಿದ. ಗ್ರೇಯಮ್ ಎದೆಗುಂದಲಿಲ್ಲ. ಉಪಾಧ್ಯಾಯನಾಗಿ ಮತ್ತು ಲೇಖಕನಾಗಿ ಜೀವನ ಸಾಗಿಸಿಕೊಂಡು ತನ್ನ ಅಧ್ಯಯನವನ್ನು ಮುಂದುವರಿಸಿದ. ಈಗ ರಾಯಲ್ ಟೆಕ್ನಿಕಲ್ ಕಾಲೇಜ್ ಎಂಬ ಹೆಸರು ಪಡೆದಿರುವ ಸಂಸ್ಥೆಯಲ್ಲಿ ಥಾಮಸ್ ಥಾಮ್ಸನ್ ಎಂಬಾತನಲ್ಲಿಯೂ ಅನಂತರ ಎಡಿನ್‍ಬರಾದಲ್ಲಿ ಥಾಮಸ್ ಹೋಪ್ ಎಂಬಾತನಲ್ಲಿಯೂ ವ್ಯಾಸಂಗ ಮಾಡಿ ಗ್ಲಾಸ್ಗೊ ವಿಶ್ವವಿದ್ಯಾಲಯದ ಪದವೀಧರನಾದ (1826). ಮುಂದೆ ಅದೇ ವಿಶ್ವವಿದ್ಯಾಲಯದಲ್ಲಿ, ಎಡಿನ್‍ಬರಾದಲ್ಲಿರುವ ಆಂಡರ್ಸ್‍ನ್ ಇನ್ಸ್ಟಿಟ್ಯೂಷನ್ನಿನಲ್ಲಿ, ರಸಾಯನ ವಿಜ್ಞಾನದ ಪ್ರಾಧ್ಯಾಪಕನಾದ (1830).   ಅಲ್ಲಿ ಏಳು ವರ್ಷ ಕೆಲಸ ಮಾಡಿ ಲಂಡನ್ನಿಗೆ ತೆರಳಿ (1837) ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾದ. ತರುವಾಯ ನ್ಯೂಟನ್ ಮತ್ತು ಸರ್ ಜಾನ್ ಹರ್ಷೆಲ್‍ರವರಂತೆ ಟಂಕಸಾಲೆಯ ಮುಖ್ಯಾಧಿಕಾರಿಯಾದ (1855).  1869ರ ಸೆಪ್ಟೆಂಬರ್ 11 ರಂದು ನಿಧನ ಹೊಂದುವವರೆಗೂ ಅದೇ ಹುದ್ದೆಯಲ್ಲಿ ಮುಂದುವರಿದ.

	ಗ್ರೇಯಮನ ಆಸಕ್ತಿಯನ್ನು ಕೆರಳಿಸಿದ ಮೊತ್ತಮೊದಲ ವೈಜ್ಞಾನಿಕ ವಿಷಯವೆಂದರೆ ಅನಿಲಗಳ ವಿಸರಣಶೀಲತೆ (ಅಂದರೆ ವ್ಯಾಪನಶೀಲತೆ). ಒಂದು ಪಾತ್ರೆಯ ಕೆಳಗಿನ ಅರ್ಧ ಭಾಗದಲ್ಲಿ ಆಕ್ಸಿಜನ್ನನ್ನೂ ಮೇಲಿನ ಅರ್ಧ ಭಾಗದಲ್ಲಿ ಹೈಡ್ರೋಜನ್ನನ್ನೂ ಇಟ್ಟು ಕೆಲಕಾಲ ಬಿಟ್ಟರೆ ಎರಡು ಅನಿಲಗಳೂ ಚೆನ್ನಾಗಿ ಬೆರೆತು ಒಂದೇ ಸಮವಾಗಿ ಪಾತ್ರೆಯಲ್ಲೆಲ್ಲ ವ್ಯಾಪಿಸುತ್ತವೆ. ಆಕ್ಸಿಜನ್ ಭಾರವಾದ ಅನಿಲವಾದರೂ ಅದು ಕೆಳಗಡೆಯೇ ಉಳಿಯದೆ ಸಮವಾಗಿ ಪಾತ್ರೆಯಲ್ಲೆಲ್ಲ ಹರಡಿ ಹೋಗುವುದಕ್ಕೂ ಅದೇ ರೀತಿ ಹಗುರವಾದ ಹೈಡ್ರೋಜನ್ ಪಾತ್ರೆಯಲ್ಲೆಲ್ಲ ಒಂದೇ ಸಮವಾಗಿ ಹರಡಿಕೊಳ್ಳುವುದಕ್ಕೂ ಅನಿಲ ಚಲನ ಸಿದ್ಧಾಂತ ಸೂಕ್ತ ವಿವರಣೆಯನ್ನು ನೀಡಬಲ್ಲದು. ಆದರೆ ಗ್ರೇಯಮ್ ಅನಿಲಗಳ ವಿಸರಣಶೀಲತೆಯ ಬಗ್ಗೆ ಸಂಶೋಧನೆ ಕೈಗೊಂಡಾಗ ಅನಿಲ ಚಲನ ಸಿದ್ಧಾಂತ ಇನ್ನೂ ಜನ್ಮ ತಾಳಿರಲಿಲ್ಲ. ಅನಿಲಗಳು ಯಾವ ದರದಲ್ಲಿ ವಿಸರಿಸುವುದೆಂಬುದನ್ನು ಪರೀಕ್ಷಿಸುವುದಕ್ಕಾಗಿ ಗ್ರೇಯಮ್ ಪ್ಯಾರಿಸ್ ಪ್ಲಾಸ್ಟರಿನ ಬೆಣೆಯ ಮೂಲಕ ಸಪುರವಾದ ನಾಳಗಳ ಮೂಲಕ ಪ್ಲಾಟಿನಮ್ ತಗಡಿನಲ್ಲಿ ಕೊರೆದ ಒಂದು ಚಿಕ್ಕ ರಂಧ್ರದ ಮೂಲಕ ಅನಿಲಗಳು ಪ್ರಸರಿಸುವುದನ್ನು ಅಧ್ಯಯನ ಮಾಡಿ ಅನಿಲಗಳ ಈ ವಿಸರಣೆಯ ದರ ಅವುಗಳ ಸಾಂದ್ರತೆಯ ವರ್ಗಮೂಲಕ್ಕೆ ವ್ಯಸ್ತ ಅನುಪಾತದಲ್ಲಿರುವುದೆಂಬ ನಿಯಮವನ್ನು ಕಂಡುಹಿಡಿದ. ಇದೇ ಗ್ರೇಯಮನ ಅನಿಲ ವಿಸರಣೆಯ ನಿಯಮ (ಗ್ರೇಯಮ್ಸ್ ಲಾ ಆಫ್ ಡಿಫ್ಯೂಷನ್). ತರುವಾಯ ಆತ ದ್ರಾವ್ಯ ಪದಾರ್ಥಗಳ ಅಣುಗಳೂ ಅಯಾನುಗಳೂ ದ್ರಾವಣಗಳಲ್ಲಿ ವ್ಯಾಪಿಸಿಕೊಳ್ಳುವ ರೀತಿಯನ್ನು ಅಧ್ಯಯನ ಮಾಡತೊಡಗಿದ. ನೀರು ತುಂಬಿದ ಸಿಲಿಂಡರಿನ ತಳದಲ್ಲಿ ತಾಮ್ರದ ಸಲ್ಫೇಟಿನ ಒಂದು ಹರಳನ್ನು ಇಟ್ಟರೆ ಅದರ ಅಯಾನುಗಳು ಕಾಲಕ್ರಮದಲ್ಲಿ ಸಿಲಿಂಡರಿನ ಮೇಲ್ಭಾಗದಲ್ಲೆಲ್ಲ ಹರಡಿಕೊಂಡು ಬಣ್ಣ ಒಂದೇ ಸಮವಾಗಿರುವ ಒಂದು ದ್ರಾವಣ ಫಲಿಸುತ್ತದೆ. ಇಲ್ಲಿ ಸಹ ಕೆಲವು ಪದಾರ್ಥಗಳು ಇನ್ನು ಕೆಲವಕ್ಕಿಂತ ಬೇಗನೆ ವ್ಯಾಪಿಸುವುವೆಂಬುದು ಗ್ರೇಯಮನ ಗಮನಕ್ಕೆ ಬಂತು. ಈ ಪ್ರಯೋಗಗಳಲ್ಲಿ ತೊಡಗಿದ್ದಾಗ ಅವನು ಒಂದು ಸ್ವಾರಸ್ಯಕರ ವಿಷಯವನ್ನು ಕಂಡ ; ದ್ರಾವ್ಯ ಪದಾರ್ಥಗಳು ವ್ಯಾಪಿಸಿಕೊಳ್ಳುವಾಗ ಅವಕ್ಕೆ ಅಡಚಣೆ ಮಾಡುವಂತೆ ಒಂದು ಪಾರ್ಚ್‍ಮೆಂಟ್ ಹಾಳೆಯನ್ನಿಟ್ಟರೆ ಸ್ವಭಾವರ್ತ ಬೇಗ ವ್ಯಾಪಿಸಿ ಕೊಳ್ಳಬಲ್ಲ ವಿವಿಧ ಲವಣಗಳು, ಸಕ್ಕರೆ ಮುಂತಾದವು ಆ ಹಾಳೆಯನ್ನು ತೂರಿಕೊಂಡು ಹೋಗುವುದನ್ನೂ ನಿಧಾನವಾಗಿ ವ್ಯಾಪಿಸುವ ಅಂಟು, ಜಿಲೆಟಿನ್ ಮುಂತಾದ ಪದಾರ್ಥಗಳು ಅದನ್ನು ತೂರಿಕೊಂಡು ಹೋಗಲಾರದೇ ಅದರ ಒಂದು ಪಕ್ಕದಲ್ಲೇ ಉಳಿದುಬಿಡುವುದನ್ನೂ ಗಮನಿಸಿದ. ಪಾರ್ಚ್‍ಮೆಂಟ್ ಹಾಳೆಯ ಮೂಲಕ ತೂರಿ ಹೋಗಬಲ್ಲ ಪದಾರ್ಥಗಳು ಸಾಮಾನ್ಯವಾಗಿ ಸ್ಫಟೀಕರಿಸುವಂಥವಾದ್ದರಿಂದ ಅವನ್ನು ಸ್ಫಟೀಕಿಯ ಪದಾರ್ಥಗಳೆಂದೂ (ಕ್ರಿಸ್ಟಲಾಯಿಡ್‍ಗಳು) ಇನ್ನೊಂದು ಗುಂಪಿನ ಪದಾರ್ಥಗಳನ್ನು ಕಲಿಲ ಪದಾರ್ಥಗಳೆಂದೂ (ಕಲಾಯಿಡ್‍ಗಳು) ಅವನು ಕರೆದ. ಸರಂಧ್ರ ಪೊರೆಯಿಂದ ತಯಾರಿಸಿದ ಧಾರಕ ಒಂದರಲ್ಲಿ ಕಲಿಲ ಪದಾರ್ಥವನ್ನಿಟ್ಟು ಆ ಧಾರಕವನ್ನು ಹರಿಯುವ ನೀರಿನಲ್ಲಿಟ್ಟರೆ ಕಲಿಲದ ಜೊತೆ ಇರಬಹುದಾದ ಸ್ಫಟೀಕಿಯ ಕಶ್ಮಲಗಳೆಲ್ಲ ನೀರಿನ ಹರಿವಿಗೆ ಸಿಕ್ಕು, ಪೊರೆಯ ಮೂಲಕ ತೂರಿಕೊಂಡು, ಹೊರಕ್ಕೆ ಬಂದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬಿಡುವುವೆಂದೂ ಕಲಿಲ ಪದಾರ್ಥಗಳ ಶುದ್ಧೀಕರಣಕ್ಕೆ ಇದೊಂದು ಒಳ್ಳೆಯ ವಿಧಾನವೆಂದೂ ಗ್ರೇಯಮ್ ತೋರಿಸಿದ. ಈ ವಿಧಾನಕ್ಕೆ ಅಪೋಹನ (ಡಯಾಲಿಸಿಸ್) ಎಂಬ ಹೆಸರು ಕೊಟ್ಟ. ಇಂದು ನಾವೆಲ್ಲ ಅರಿತಿರುವಂತೆ ಕಲಿಲ ಪದಾರ್ಥಗಳಿಗೂ ಸ್ಫಟಿಕೀಯ ಪದಾರ್ಥಗಳಿಗೂ ಇರುವ ವ್ಯತ್ಯಾಸವೇನಿದ್ದರೂ ಆ ಪದಾರ್ಥಗಳ ಅಣುಗಳ ಗಾತ್ರಗಳಲ್ಲಿ ಮಾತ್ರ. ಸ್ಫಟಿಕೀಯ ಪದಾರ್ಥಗಳ ಅಣುಗಳು ಪುಟ್ಟ ಪುಟ್ಟ ಅಣುಗಳು. ಕಲಿಲ ಪದಾರ್ಥಗಳಾದರೋ ದೊಡ್ಡ ದೊಡ್ಡ ಅಣುಗಳಿಂದ ಮಾಡಲ್ಪಟ್ಟವು ; ಇಲ್ಲವೇ ಚಿಕ್ಕ ಅಣುಗಳ ದೊಡ್ಡ ದೊಡ್ಡ ಸಮೂಹಗಳಿಂದ ಮಾಡಲ್ಪಟ್ಟವು.

	ಗ್ರೇಯಮ್ ತನ್ನ ಈ ಪ್ರಮುಖ ಸಂಶೋಧನೆಗಳನ್ನು ನಡೆಸುತ್ತಿರುವಾಗಲೇ ಮಧ್ಯೆ ಮಧ್ಯೆ ಇನ್ನೂ ಹಲವಾರು ವೈಜ್ಞಾನಿಕ ಸಮಸ್ಯೆಗಳತ್ತ ಗಮನ ಹರಿಸಿದ. ಆರ್ಥೊ, ಮೆಟ ಮತ್ತು ಪೈರೊ ಫಾಸ್ಫಾರಿಕ್ ಆಮ್ಲಗಳ ಅಧ್ಯಯನವನ್ನು ಕೈಗೊಂಡು ಬಹುಪ್ರತ್ಯಾಮ್ಲೀಯ (ಪಾಲಿಬೇಸಿಕ್) ಆಮ್ಲಗಳಿರುವುದು ಸಾಧ್ಯವೆಂದು ತೋರಿಸಿದ. ಸ್ಫಟಿಕೀಕರಣ ಜಲಯುಕ್ತ (ವಾಟರ್ ಆಫ್ ಕ್ರಿಸ್ಟಲೈಸೇಷನ್) ಲವಣ ಹೈಡ್ರೇಟುಗಳನ್ನು (ಕ್ರಿಸ್ಟಲ್ ಹೈಡ್ರೇಟುಗಳು) ನೀರಿನ ಅಣುಗಳ ಬದಲಿಗೆ ಆಲ್ಕೊಹಾಲ್ ಅಣುಗಳಿರುವ ಆಲ್ಕೊಹಾಲೇಟುಗಳನ್ನೂ ಅಧ್ಯಯನ ಮಾಡಿದ. ತನ್ನ ಕೊನೆಯ ಸಂಶೋಧನ ಪತ್ರದಲ್ಲಿ ಪೆಲೇಡಿಯಮ್ ಹೈಡ್ರೈಡನ್ನು ಕುರಿತು ವರದಿ ಮಾಡಿದ. ಒಂದು ಲೋಹ ಅನಿಲ ಧಾತು ಒಂದರ ಜೊತೆ ಸಂಯೋಗ ಹೊಂದಿ ಒಂದು ಘನ ಸಂಯುಕ್ತ ಉತ್ಪತ್ತಿ ಮಾಡುವ ಮೊತ್ತಮೊದಲ ನಿದರ್ಶನ ಅದು.

	1836ರಲ್ಲಿ ಥಾಮಸ್ ಗ್ರೇಯಮ್ ಲಂಡನಿನ ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತನಾದ. ಲಂಡನಿನ ಕೆಮಿಕಲ್ ಸೊಸೈಟಿ ಮತ್ತು ಕ್ಯಾವೆಂಡಿಷ್ ಸೊಸೈಟಿಗಳ ಸ್ಥಾಪಕರಲ್ಲೊಬ್ಬನಾಗಿದ್ದ ಗ್ರೇಯಮ್ 1841ರಲ್ಲಿ ಕೆಮಿಕಲ್ ಸೊಸೈಟಿಯ ಪ್ರಥಮ ಅಧ್ಯಕ್ಷನಾಗಿ ಆರಿಸಲ್ಪಟ್ಟ. 1846ರಲ್ಲಿ ಕ್ಯಾವೆಂಡಿಷ್ ಸೊಸೈಟಿಯ ಅಧ್ಯಕ್ಷನಾಗಿಯೂ ಆರಿಸಲ್ಪಟ್ಟ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ